"ಕನ್ನಡದ ಪ್ರಮುಖ ಕಥೆಗಾರ್ತಿ ವೈದೇಹಿ ಅವರ ಹೊಸ ಹುಡುಕಾಟಗಳನ್ನು ದಾಖಲಿಸುವ ಸಂಕಲನ ಇದು. ಈ ಎಲ್ಲ ಕಥೆಗಳ ಹಿಂದೆ ‘ಗಂಡು’ ‘ಹೆಣ್ಣು’ಗಳು ಕೂಡಿರುವ ಒಂದು ಲೋಕವಿದೆ; ಆ ಲೋಕದಲ್ಲಿ ಮಿಥುನವಿರುವಂತೆಯೇ ವಿಚ್ಛೇದವೂ ಇದೆ; ಸ್ವಾರಸ್ಯದ ಮಾತುಗಾರಿಕೆಯಿರುವಷ್ಟೇ ಗಾಢವಾದ ವಿಷಾದದ ಮಂದ್ರಸ್ಥಾಯಿಯೂ ಇದೆ. ಇಲ್ಲಿ ಉಲ್ಲಾಸದ ಉಬ್ಬರ ಕೆಲವೊಮ್ಮೆ ಮೊರೆದು ಕಾಣಿಸಿಕೊಂಡರೆ ಕೆಲವೊಮ್ಮೆ ಹಿಂಸೆಯ ನೆರಳು ಚಾಚಿಕೊಳ್ಳುತ್ತದೆ.











